ಕೇಂದ್ರ ಶಿಕ್ಷಣ ಸಲಹಾ ಮಂಡಲಿ

ಭಾರತ ಸರ್ಕಾರದ ಶಿಕ್ಷಣ ಶಾಖೆಯ ಕಾರ್ಯಯೋಜನೆಯಲ್ಲಿ ಪ್ರಧಾನ ಪಾತ್ರವಹಿಸುವ ಸ್ಥಾಯೀ ಸಲಹಾ ಮಂಡಲಿ (ಸೆಂಟ್ರಲ್ ಅಡ್ವೈಸರಿ ಬೋಡ ಆಫ್ ಎಜುಕೇಷನ್).  1917ರಲ್ಲಿ ಪ್ರಾಂತ್ಯಗಳಲ್ಲಿ ಅನುಷ್ಠಾನಕ್ಕೆ ತಂದ ದ್ವಿತಂತ್ರ ಆಡಳಿತ (ಡಯಾರ್ಕಿ) ಪದ್ಧತಿಯಿಂದ ಶಿಕ್ಷಣ ಪ್ರಾಂತೀಯ ಸರ್ಕಾರದ ಆಡಳಿತ ವಿಷಯವಾಯಿತು. ಇದರ ಫಲವಾಗಿ ಪ್ರತಿಪ್ರಾಂತ್ಯದಲ್ಲೂ ಶಿಕ್ಷಣ ತನ್ನದೇ ಆದ ಮಾರ್ಗದಲ್ಲಿ ಮುಂದುವರಿಯುವಂತಾಗಿ ಅಖಂಡ ಭಾರತಕ್ಕೊಪ್ಪುವ ಸಾಮಾನ್ಯ ನೀತಿಯನ್ನು ರೂಪಿಸಿಕೊಳ್ಳಲಾರದ ಪರಿಸ್ಥಿತಿ ಸಂಭವಿಸಿತು. ಇದನ್ನು ತಪ್ಪಿಸಿ ಭಾರತೀಯ ಶಿಕ್ಷಣದ ನೀತಿಯಲ್ಲಿ ಸಮನ್ವಯವನ್ನು ಮೂಡಿಸಲು ನೆರವಾಗುವಂತೆ ಸರ್ಕಾರಕ್ಕೆ ಸೂಕ್ತ ಸಲಹೆ ನೀಡಬಲ್ಲ ಸಂಸ್ಥೆಯೊಂದರ ಅಗತ್ಯ ಕಂಡುಬಂತು. ಅದಕ್ಕಾಗಿ ಕೇಂದ್ರ ಸರ್ಕಾರ 1921ರಲ್ಲಿ ಈ ಮಂಡಳಿಯನ್ನು ರಚಿಸಿತು. ಆದರೆ ಆ ಸುಮಾರಿನಲ್ಲಿ ಸಂಭವಿಸಿದ ಆರ್ಥಿಕ ಮುಗ್ಗಟ್ಟಿನ ದೆಸೆಯಿಂದ ಮಂಡಳಿಯನ್ನು 1923ರಲ್ಲಿ ರದ್ದುಪಡಿಸಲಾಯಿತು. ಹರ್ಟಾಗ್ ಸಮಿತಿಯ (1927) ಸಲಹೆಯಂತೆ ಮತ್ತೆ ಇದನ್ನು 1935ರಲ್ಲಿ ಅಸ್ತಿತ್ವಕ್ಕೆ ತರಲಾಯಿತು.

	ಕೇಂದ್ರ ಅಥವಾ ಪ್ರಾಂತ್ಯ ಸರ್ಕಾರಗಳು ಸೂಚಿಸುವ ಶಿಕ್ಷಣ ಸಮಸ್ಯೆಗಳನ್ನು ಪರಿಶೀಲಿಸಿ ಸಲಹೆ ನೀಡುವುದು, ರಾಷ್ಟ್ರಕ್ಕೆ ವಿಶೇಷ ಆಸಕ್ತಿಯ ಅಥವಾ ಉಪಯುಕ್ತವೆನಿಸುವ ಶೈಕ್ಷಣಿಕ ಪ್ರಗತಿಯ ಬಗ್ಗೆ ರಾಜ್ಯಸರ್ಕಾರಗಳಿಂದ ಮಾಹಿತಿಯನ್ನು ಸಂಗ್ರಹಿಸಿ, ಪರಿಶೀಲಿಸಿ, ಅಗತ್ಯವೆನಿಸುವ ಸಲಹೆಗಳೊಡನೆ ಕೇಂದ್ರ ಸರ್ಕಾರಕ್ಕೂ ರಾಜ್ಯ ಸರ್ಕಾರಗಳಿಗೂ ಒದಗಿಸುವುದು-ಇವು ಇದರ ಮುಖ್ಯ ಕರ್ತವ್ಯಗಳು. ಕೇಂದ್ರ ಸರ್ಕಾರದ ಶಿಕ್ಷಣ ಸಚಿವರು ಇದರ ಅಧ್ಯಕ್ಷರು. ಕೇಂದ್ರ ಸರ್ಕಾರದ ಶಿಕ್ಷಣ ಸಲಹೆಗಾರರು, ಭಾರತ ಸರ್ಕಾರ ನಾಮಕರಣ ಮಾಡುವ 15 ಮಂದಿ (ಅವರಲ್ಲಿ ನಾಲ್ವರು ಮಹಿಳೆಯರು) ಶಿಕ್ಷಣ ತಜ್ಞರು, ಪಾರ್ಲಿಮೆಂಟು ಆರಿಸುವ 5 ಮಂದಿ ಸದಸ್ಯರು, ಅಂತರ ವಿಶ್ವವಿದ್ಯಾಲಯ ಮಂಡಲಿಯ ಇಬ್ಬರು ಪ್ರತಿನಿಧಿಗಳು, ಅಖಿಲ ಭಾರತ ತಾಂತ್ರಿಕ ಶಿಕ್ಷಣದ ಸಲಹಾ ಮಂಡಲಿಯ (ಆಲ್ ಇಂಡಿಯ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಷನ್) ಇಬ್ಬರು ಪ್ರತಿನಿಧಿಗಳು, ಪ್ರತಿರಾಜ್ಯದಿಂದಲೂ ಒಬ್ಬೊಬ್ಬ ಪ್ರತಿನಿಧಿ (ಆಯಾ ರಾಜ್ಯದ ಶಿಕ್ಷಣ ಸಚಿವರು ಅಥವಾ ಅವರ ಪ್ರತಿನಿಧಿ), ಕೇಂದ್ರ ಸರ್ಕಾರದ ನೇಮಿಸುವ ಮಂಡಲಿಯ ಕಾರ್ಯದರ್ಶಿ-ಇವರು ಇದರ ಸದಸ್ಯರಾಗಿರುವರು. ಸಮಾಜ ಶಿಕ್ಷಣ ಸಮಿತಿ, ಪ್ರೌಢಶಿಕ್ಷಣ ಸಮಿತಿ, ಉನ್ನತ ಶಿಕ್ಷಣ ಸಮಿತಿ-ಈ ಮೂರು ಸಮಿತಿಗಳ ಮೂಲಕ ಮಂಡಲಿ ತನ್ನ ಕರ್ತವ್ಯವನ್ನು ನಿರ್ವಹಿಸುತ್ತದೆ.

	ಮಂಡಲಿ ವರ್ಷಕ್ಕೊಮ್ಮೆ ಸಭೆ ಸೇರಿ ಪ್ರಮುಖ ಶಿಕ್ಷಣ ಸಮಸ್ಯೆಗಳನ್ನು ಪರಿಶೀಲಿಸುತ್ತದೆ. ಅದರ ಸ್ಥಾವರ ಸಮಿತಿಗಳಲ್ಲಿ ರಾಜ್ಯಗಳ ಶಿಕ್ಷಣ ಸಚಿವರೂ ಶಿಕ್ಷಣಾಧಿಕಾರಿಗಳೂ ಸದಸ್ಯರಾಗಿದ್ದು, ಚರ್ಚೆಯಲ್ಲಿ ಭಾಗವಹಿಸುವರು. ಮಂಡಳಿ ತಾನು ಕೈಕೊಳ್ಳುವ ತೀರ್ಮಾನಗಳನ್ನು ರಾಜ್ಯ ಸರ್ಕಾರಗಳಿಗೆ ಸಲಹೆಯ ರೂಪದಲ್ಲಿ ಕಳಿಸಿಕೊಡುವುದು. ರಾಜ್ಯ ಸರ್ಕಾರಗಳು ಅವನ್ನು ಅನುಷ್ಠಾನಕ್ಕೆ ತರಲೇಬೇಕೆಂಬ ಕಟ್ಟಿಲ್ಲದಿದ್ದರೂ ಆ ತೀರ್ಮಾನಗಳಲ್ಲಿ ರಾಜ್ಯದ ಪ್ರತಿನಿಧಿಗಳೂ ಪಾತ್ರವಹಿಸುವುದರಿಂದ ಸ್ವಾಭಾವಿಕವಾಗಿ ಅವು ಪರಿಣಾಮಕಾರಿಯಾಗಬಲ್ಲವು.

	1935ರಿಂದ ಮಂಡಳಿ ಭಾರತೀಯ ಶಿಕ್ಷಣದ ಪುನರ್ರಚನೆಗೆ ನೆರವಾಗುವ ಅನೇಕ ಸಲಹೆಗಳನ್ನು ನೀಡುತ್ತಿದೆ. ಗ್ರಾಂಥಿಕ ಶಿಕ್ಷಣದಂತೆ ವೃತ್ತಿ ಶಿಕ್ಷಣಕ್ಕೂ ಅವಕಾಶ ಕಲ್ಪಿಸಿ, ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯಗಳಿಗೆ ಹೇಗೋ ಹಾಗೆ ವೃತ್ತಿ ಶಿಕ್ಷಣ ಸಂಸ್ಥೆಗಳಿಗೂ ಉದ್ಯೋಗಗಳಿಗೂ ಸೇರಲು ಅವಕಾಶ ಕಲ್ಪಿಸುವುದರಲ್ಲಿ ಇದು ಪ್ರಮುಖ ಪಾತ್ರ ವಹಿಸಿತು. ತನ್ನ ಸಲಹೆಯಂತೆ ರಚನೆಯಾದ ಆಬಟ್ ಮತ್ತು ವುಡ್ಡರ ವರದಿಯ ಸಲಹೆಗಳನ್ನೊಳಗೊಂಡ ಸಾರ್ಜಂಟ್ ವರದಿಯ ಮೂಲಕ ಅದು 1944ರಲ್ಲಿ ಯುದ್ಧಾನಂತರದ ಶಿಕ್ಷಣದ ಪುನರ್ರಚನೆಗಾಗಿ ವ್ಯಾಪಕವಾದ ಸಲಹೆ ನೀಡಿತು. ಸ್ವಾತಂತ್ರ್ಯಾನಂತರ ದಿನಗಳಲ್ಲಿ ಇದರ ಸಲಹೆಯಂತೆ ಭಾರತ ಸರ್ಕಾರ ಶಿಕ್ಷಣ ಆಯೋಗಗಳನ್ನು ರಚಿಸಿ ಕಾಲಕಾಲಕ್ಕೆ ಶಿಕ್ಷಣಕ್ಷೇತ್ರದ ಪುನರ್ರಚನೆಯನ್ನು ಕೈಕೊಳ್ಳುತ್ತಿದೆ.

	ಮಂಡಲಿಯ ನೇತೃತ್ವದಲ್ಲಿ ಶಿಕ್ಷಣದ ಕೇಂದ್ರ ಕಚೇರಿ (ಸೆಂಟ್ರಲ್ ಬ್ಯೂರೊ ಆಫ್ ಎಜುಕೇಷನ್) ಕೆಲಸ ಮಾಡುತ್ತಿದೆ. ಅದು ಭಾರತದ ಮತ್ತು ವಿದೇಶಗಳ ಶಿಕ್ಷಣದ ಪ್ರಮುಖ ಅಂಶಗಳನ್ನು ಸಂಗ್ರಹಿಸುತ್ತದೆ. ಭಾರತೀಯ ಶಿಕ್ಷಣದ ವಾರ್ಷಿಕ ಮತ್ತು ಪಂಚವಾರ್ಷಿಕ ವರದಿಗಳನ್ನೂ ಇತರ ಶೈಕ್ಷಣಿಕ ವರದಿಗಳನ್ನೂ ಅಂಕಿಅಂಶಗಳನ್ನೂ ಪ್ರಕಟಿಸುತ್ತದೆ. ಭಾರತ ಸರ್ಕಾರ ರಾಷ್ಟ್ರದ ಬೇರೆ ಬೇರೆ ರಾಜ್ಯಗಳಲ್ಲೂ ವಿದೇಶಗಳಲ್ಲೂ ಕಂಡುಬರುವ ಪ್ರಗತಿಯನ್ನು ರಾಜ್ಯ ಸರ್ಕಾರಗಳ ಗಮನಕ್ಕೆ ತನ್ನ ಪ್ರಕಟಣೆಗಳ ಮೂಲಕ ಒದಗಿಸುತ್ತದೆ.              							 
(ಕೆ.ಬಿ.)